ರಾಜಗೀರ್
ಭಾರತದ ಬಿಹಾರ ರಾಜ್ಯದ ನಲಂದಾ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ ಪಟ್ಟಣ.  ಪಟ್ಟಣದಿಂದ ಆಗ್ನೇಯಕ್ಕೆ 102 ಕಿ.ಮೀ. ದೂರದಲ್ಲಿದೆ.  ಐತಿಹಾಸಿಕ ಪ್ರಸಿದ್ಧವಾದ ಹಿಂದಿನ ರಾಜಗೃಹವೇ ಇಂದು ರಾಜಗೀರ್ ಆಗಿದೆ.  ವಿಶ್ವದ ಪ್ರಾಚೀನ ಪಟ್ಟಣಗಳಲ್ಲೊಂದೆಂದು ಪರಿಗಣಿಸಲಾಗುವ ಈ ನಗರ ಬೌದ್ಧ, ಜೈನ, ಹಿಂದೂ ಮತ್ತು ಮುಸ್ಲಿಮ್ ಧರ್ಮಗಳ ಯಾತ್ರಾಸ್ಥಳ.  ಇದರ ಸುತ್ತ ಇರುವ ಬಿಸಿನೀರಿನ ಬುಗ್ಗೆಗಳು, ಹಸಿರು ಬೆಟ್ಟಗಳು ಮತ್ತು ಅರಣ್ಯ ಪ್ರದೇಶ - ಇವುಗಳಿಂದ ರಾಜಗೃಹ ಚಳಿಗಾಲದ ಒಂದು ಪ್ರಮುಖ ಆರೋಗ್ಯಧಾಮವಾಗಿದೆ.
ಮಹಾಭಾರತದಲ್ಲಿ ಉಲ್ಲೇಖಿಸಿರುವಂತೆ ವೈಭಾರ, ವರಾಹ, ವೃಷಭ, ಋಷಿಗಿರಿ ಮತ್ತು ಜೈತ್ಯಕ್ ಎಂದು ಪಾಲಿ ಗ್ರಂಥಗಳಲ್ಲಿ ಭಾರ, ಪಾಂಡವ ವೈಪುಲ್ಯ, ಗೃಧ್ರಕೂಟ ಮತ್ತು ಋಷಿಗಿರಿ ಎಂದು ಉಲ್ಲೇಖಿಸಲಾಗಿರುವ ಐದು ಬೆಟ್ಟಗಳು ಈ ಪಟ್ಟಣವನ್ನು ಸುತ್ತುವರಿದಿವೆ.

ಗೃಧ್ರಕೂಟ ಬೆಟ್ಟದ ಮೇಲ ಬೌದ್ಧರ ಪವಿತ್ರಸ್ಥಳ ಒಂದಿದೆ.  ಬುದ್ಧ ಇಲ್ಲಿ ತನ್ನ ಅನುಯಾಯಿಗಳಿಗೆ ಧರ್ಮೋಪದೇಶ ಮಾಡುತ್ತಿದ್ದನೆನ್ನಲಾಗಿದೆ.  ಗೃಧ್ರಕೂಟದ ತಪ್ಪಲಿನಿಂದ ಬೆಟ್ಟದ ಮೇಲಕ್ಕೆ ಹೋಗಲು ಬಿಂಬಸಾರ ನಿರ್ಮಿಸಿದನೆಂದು ಹೇಳುವ ಪ್ರಾಚೀನ ಬಿಂಬಸಾರ ರಸ್ತೆಯಿದೆ.  ಜಪಾನಿನ ಬೌದ್ಧ ಯಾತ್ರಿಕರು ಕಟ್ಟಿಸಿರುವ ಶಾಂತಿಸ್ತೂಪ ಗೃಧ್ರಕೂಟಕ್ಕೆ ಸೇರಿದಂತಿದೆ.  ರತ್ನಗಿರಿ ಬೆಟ್ಟದ ಮೇಲೆ ಒಂದು ದೇವಸ್ಥಾವನ್ನು ಸ್ತೂಪದ ಹತ್ತಿರದಲ್ಲೇ ಕಟ್ಟಲಾಗಿದೆ.  ಆಕಾಶ ರಜ್ಜು ಪಥದಲ್ಲಿ (ರೋಪ್ ವೇ) ಅಲ್ಲಿಗೆ ಬರಲು ವ್ಯವಸ್ಥೆ ಮಾಡಲಾಗಿದೆ.

ಕಲ್ಲಿನಗೋಡೆಯಿಂದ ಆವರಿಸಿರುವ ಪ್ರದೇಶದಲ್ಲಿ (ಸು. 60 ಚ.ಮೀ. ವಿಸ್ತೀರ್ಣ) ಅಜಾತಶತ್ರು ತನ್ನ ತಂದೆಯಾದ ಬಿಂಬಸಾರನನ್ನು ಗೃಹಬಂಧನದಲ್ಲಿ ಇರಿಸಿದ್ದನೆಂದು ತಿಳಿದುಬರುತ್ತದೆ.  ಇಲ್ಲಿರುವ ಮುನಿಯಾರ್ ಮಠ ವರ್ತುಲಾಕಾರವಾಗಿರುವ ಒಂದು ಇಟ್ಟಿಗೆ ಕಟ್ಟಡ.  ಈ ಪ್ರದೇಶ ನಾಗರ ಉಪಾಸನೆಯ ಕೆಂದ್ರವಾಗಿತ್ತು.  ಮಹಾಭಾರತ ಪ್ರಕಾರ ರಾಜಗೃಹ ನಾಗಮಣಿಯ ಸ್ವರ್ಗ ಪ್ರದೇಶವಾಗಿತ್ತು.  ಪುರಾತನ ಮನಿಯಾರ್ ಮಠ ಪ್ರಾಚೀನ ಕಾಲದಲ್ಲಿ ಮಣಿನಾಗದೇವರು ಇದ್ದ ಪ್ರದೇಶವೆಂದು ಗುರುತಿಸಲಾಗಿದೆ.

ಚಿತ್ರ ಲಗತ್ತಿಸುವುದು.
ರಾಜಗೀರ್‍ನ ಒಂದು ವಿಹಂಗಮ ನೋಟ. ಹಿಂದೂ ದೇವಾಲಯ ಮತ್ತು ಬಿಸಿನೀರಿನ ಬುಗ್ಗೆಗಳು ಇಲ್ಲಿವೆ.

ವೈಭಾರ ಬೆಟ್ಟದ ದಕ್ಷಿಣತುದಿಯಲ್ಲಿ ಸೋನ್ ಭಂಡಾರ್ ಗುಹೆಗಳು ಇವೆ.  ಇಲ್ಲಿನ ಗೋಡೆಗಳ ಮೇಲಿರುವ ತೀರ್ಥಂಕರ ಶಿಲ್ಪಗಳು ಜೈನರಿಗೆ ಸೇರಿದವೆಂಬುದನ್ನು ಸೂಚಿಸುತ್ತವೆ.  ಇಲ್ಲಿಂದ ಒಂದೂವರೆ ಕಿ.ಮೀ. ದೂರದಲ್ಲಿ ಜರಾಸಂಧನನ್ನು ಭೀಮ ಮಲ್ಲಯುದ್ಧದಲ್ಲಿ ಕೊಂದ ಸ್ಥಳ ಒಂದನ್ನು ಗುರುತಿಸಲಾಗಿದೆ. ಬಿಂಬಸಾರ ಬುದ್ಧನಿಗೆ ಕಾಣಿಕೆಯಾಗಿ ಕೊಟ್ಟನೆಂದು ಹೇಳುವ ವೇಣುವನ ಅಥವಾ ಬಿದಿರು ಕಾಡನ್ನು ಬೌದ್ಧರ ವಿಹಾರವಾಗಿ ಮಾರ್ಪಾಟು ಮಾಡಲಾಗಿದೆ.  ಇಲ್ಲೇ ಕರಂದ ತಟಾಕವನ್ನು ಕೂಡ ಗುರುತಿಸಲಾಗಿದೆ.  ವೈಭಾರ ಬೆಟ್ಟದ ಪೂರ್ವದ ಇಳಿಜಾರಿನಲ್ಲಿ ಮತ್ತು ಬಿಸಿನೀರಿನ ಬುಗ್ಗೆಗಳ ಗುಂಪುಗಳ ಮಧ್ಯೆ ಜರಾಸಂಧ್-ಕಿ-ಬೈಠಕ್ ಎಂದು ಕರೆಯುವ ಕಲ್ಲಿನ ಗುಹೆ ಇದೆ.

ರಾಜಗೀರ್‍ನ ಪ್ರೇಕ್ಷಣೀಯ ಸ್ಥಳಗಳಲ್ಲಿ ಹಿಂದಿನ ರಾಜಗೃಹದ ಸುತ್ತ ಕಟ್ಟಿದ್ದ ಕೋಟೆ ಗೋಡೆಯ ಅವಶೇಷಗಳೂ ಸಿಹಿನೀರಿನ ಬಿಸಿನೀರ ಬುಗ್ಗೆಗಳು ಸೇರಿವೆ.  ಇಲ್ಲಿನ ಬ್ರಹ್ಮಕುಂಡದ ನೀರಿನ ಉಷ್ಣತೆ 1050 ಈ. ಇರುವುದೆನ್ನುವರು.

ಈ ಪಟ್ಟಣಕ್ಕೆ ಪ್ರಾಚೀನ ಇತಿಹಾಸವಿದ್ದು ಇಲ್ಲಿ ಅನೇಕ ರಾಜಮನೆತನಗಳು ಆಳ್ವಿಕೆ ನಡೆಸಿದ್ದು ಆಯಾ ಕಾಲಕ್ಕೆ ತಕ್ಕಂತೆ ಈ ಪಟ್ಟಣಕ್ಕೆದ ವಸುವಂತಿ, ಭಾರ್ಹದ್ರಾಥಪುರ, ಗಿರಿವ್ರಜ, ಕುಶಾಗ್ರಪುರ ಮೊದಲಾದ ಹೆಸರುಗಳುಂಟು.  ರಾಮಾಯಣದಲ್ಲಿ ಬರುವ ವಸುಮತಿ ಹೆಸರಿನ ಮೂಲ ಪುರಾಣಕಾಲದರಾಜ ಬ್ರಹ್ಮನ ಮಗ ವಸು. ಈತ ಈ ನಗರದ ಸ್ಥಾಪಕನೆಂದು ಹೇಳಲಾಗಿದೆ.  ಪುರಾಣಗಳಲ್ಲಿ ಮತ್ತು ಮಹಾಭಾರತದಲ್ಲಿ ಭಾರ್ಹದ್ರಾಥಪುರ ಎಂದು ವರ್ಣಿಸಲಾಗಿದೆ. ಹಾಗೆಯೇ ಪುರಾಣ ಪ್ರಸಿದ್ಧನಾದ ಬೃಹದ್ರಥನ ಮರಿಮೊಮ್ಮಗ ಜರಾಸಂಧ ಸ್ಥಾಪಿಸಿದ ರಾಜಧಾನಿ ಎನ್ನುವುದುಂಟು.  ಈ ನಗರದ ಸುತ್ತಲೂ ಇರುವ ಪ್ರದೇಶ ಗಿರಿಗಳಿಂದ ಆವೃತವಾಗಿರುವುದರಿಂದ ಇದು ಗಿರಿವ್ರಜ.  ಕೆಲವು ಜೈನ, ಬೌದ್ಧ ಸಂಸ್ಕøತ ಗೃಂಥಗಳು ಮತ್ತು ಯುವಾನ್ ಚಾಂಗ್‍ನ ಬರವಣಿಗೆಗಳಲ್ಲಿ ಇಲ್ಲಿ ಬೆಳೆಯುತ್ತಿದ್ದ ಸುವಾಸನಾಯುಕ್ತ ಹುಲ್ಲಿನಿಂದ ಮತ್ತು ಬೃಹದ್ರಥನ ಅನಂತರ ಆಳಿದ ಕುಶಾಗ್ರ ರಜನ ಹೆಸರಿನಿಂದ ಕುಶಾಗ್ರಪುರವೆಂಬ ಹೆಸರು ಬಂದಿತೆನ್ನಲಾಗಿದೆ. ನೂರಾರು ವರ್ಷಗಳ ವರೆಗೆ ಮಗಧ ರಾಜ್ಯದ ರಾಜಧಾನಿಯಾಗಿದ್ದ ರಾಜಗೃಹ ಅಥವಾ ರಾಜರಸ್ವರ್ಗ ಎಂಬ ಹೆಸರು ಇದಕ್ಕೆ ಬಂದಿರಬಹುದು.

ರಾಮಾಯಣದ ಪ್ರಕಾರ ಗಿರಿವ್ರಜ ಪ್ರದೇಶವನ್ನು ಬ್ರಹ್ಮನ ನಾಲ್ಕನೆಯ ಮಗ ವಸು ನಿರ್ಮಾಣ ಮಾಡಿದ.  ಮುಂದೆ ಕುರುಕ್ಷೇತ್ರಯುದ್ಧ ಆಗುವವರೆಗೂ ಈ ನಗರದವಿಷಯ ಎಲ್ಲೂ ಬರುವುದಿಲ್ಲ.  ಈ ಕಾಲಕ್ಕೆ ಮುಂಚೆ ಬೃಹದ್ರಥನೆಂಬ ರಾಜ ಇಲ್ಲಿ ಬಾರ್ಹದ್ರಥ ಮನೆತನವನ್ನು ಸ್ಥಾಪಿಸಿದನೆಂದು ತಿಳಿದುಬರುತ್ತದೆ.  ಇವನ ಉತ್ತರಾಧಿಕಾರಿಯಾಗಿ ಪ್ರಸಿದ್ಧನೂ ಶಕ್ತಿಶಾಲಿಯೂ ಆದ ಜರಾಸಂಧ ಆಳಿದ.  ಇವನಿಗೆ ಶ್ರೀಕೃಷ್ಣನ ಸೋದರಮಾವ ಕಂಸನೊಂದಿಗೆ ಮದುವೆ ಸಂಬಂಧವಿತ್ತು.  ಶ್ರೀಕೃಷ್ಣನಿಂದ ಕಂಸ ಸತ್ತಾಗ ಜರಾಸಂಧ ಕೃಷ್ಣನ ಮತ್ತು ಅವನ ಜನರ ಮೇಲೆ ಮಥುರಾಕ್ಕೆ ದಂಡೆತ್ತಿ ಹೋಗಿ ಸೋತುಹಿಂದಿರುಗಿದ.  ತರುವಾಯ ಶ್ರೀಕೃಷ್ಣ ಭೀಮಾರ್ಜುನರೊಡನೆಗಿರಿವ್ರಜಕ್ಕೆತೆರಳಿ ಅಲ್ಲಿ ಭೀಮ ಜರಾಸಂಧರ ನಡುವೆಕಾಳಗ ನಡೆದು ಜರಾಸಂಧ ಹತನಾದ.
ಮಗಧ ರಾಜ್ಯದ ರಾಜಧಾನಿಯಾಗಿ ರಾಜಗೃಹ ಬಿಂಬಸಾರನ ಕಾಲದಲ್ಲಿ (ಕ್ರಿ. ಪೂ. 541-491) ಪ್ರಸಿದ್ಧವಾಯಿತೆಂದೂ ಮುಂದೆ ಅವನ ಮಗ ಅಜಾತಶತ್ರು ಬುದ್ಧನ ಅನುಯಾಯಿಗಳಲ್ಲಿ ಒಬ್ಬನಾದನೆಂದು ಪ್ರತೀತಿ. 
(ನೋಡಿ- ಬಿಂಬಸಾರ)
(ನೋಡಿ- ಅಜಾತಶತ್ರು)
(ಟಿ.ಡಿ.ಪಿ.;ಆರ್.ಎನ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ